No title

‘ಅಂತ್ಯೋದಯ’ ಕಾರ್ಯಕ್ರಮ’
*ಸರ್ಕಾರಿ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ : ಕೋಟ ಶ್ರೀನಿವಾಸ ಪೂಜಾರಿ*
ಶಿವಮೊಗ್ಗ, ಸೆಪ್ಟೆಂಬರ್ 03 (ಕರ್ನಾಟಕ ವಾರ್ತೆ):
      ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅತ್ಯಂತ ಪಾರದರ್ಶಕವಾಗಿ ಈ ಸವಲತ್ತುಗಳನ್ನು ಅರ್ಹರನ್ನು ತಲುಪಲು ಜನಪ್ರತಿನಿಧಿಗಳು ಸಹಕರಿಸಬೇಕೆಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಗೂ ವಿವಿಧ ಅಭಿವೃದ್ದಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಪೆಸಿಟ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ   ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ವಿವಿಧ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

  ಬಡವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದ ಈ ಎಲ್ಲ ಸೌಲಭ್ಯಗಳ ಕುರಿತು ಗ್ರಾ.ಪಂ ನಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಿಳಿದುಕೊಂಡು ಅರ್ಹರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಅಂತ್ಯೋದಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.

     ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ನೀಡಲಾಗುವ ಅನುದಾನವನ್ನು ಪಾರದರ್ಶಕವಾಗಿ ಬಳಕೆ ಮಾಡಿಕೊಂಡಲ್ಲಿ ಇನ್ನು 5 ವರ್ಷದಲ್ಲಿ ಎಸ್‍ಸಿ/ಎಸ್‍ಟಿ ಸಾಕಷ್ಟು ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‍ಗಳಾಗುತ್ತಾರೆ. ರಾಜ್ಯದಲ್ಲಿ 826 ವಸತಿ ಶಾಲೆಗಳಿವೆ. ವಸತಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿದ್ದು, ವಸತಿ ಶಾಲೆಗಳ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ.
    ವಸತಿ ಶಾಲೆಗಳಲ್ಲಿ ಶೇ.99.15 ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಐಐಟಿ, ಐಐಎಂ ಗೆ ಸಹ ಮಕ್ಕಳು ಆಯ್ಕೆಯಾಗಿದ್ದಾರೆ. ಇನ್ನು ಮುಂದೆ ಇಂತಹ ಕೋರ್ಸಿಗೆ ಆಯ್ಕೆಯಾದ ಮಕ್ಕಳ ಶುಲ್ಕ ಪಾವತಿ ಸಹ ಮಾಡಲು ಇಲಾಖೆ ಯೋಚಿಸುತ್ತಿದೆ.
     ಬಡಮಕ್ಕಳ ರಕ್ಷಣೆ ಉದ್ದೇಶದಿಂದ ಒನಕೆ ಓಬವ್ವ ಆತ್ಮರಕ್ಷಣೆ ಕಲೆ ಯೋಜನೆಯಡಿ ರಾಜ್ಯದಲ್ಲಿ 4 ಲಕ್ಷ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡಲಾಗಿದೆ. 2 ಸಾವಿರ ಕರಾಟೆ ಶಿಕ್ಷಕರ ನೇಮಕ ಮಾಡಲಾಗಿದೆ. ಸೌಲಭ್ಯ ನೀಡುವಿಕೆ ಪಾರದರ್ಶಕಗೊಳಿಸಲು ಸೇವಾಸಿಂಧು ಆನ್‍ಲೈನ್ ಪೋರ್ಟಲ್ ರಚಿಸಲಾಗಿದೆ. ನಿನ್ನೆ ಒಂದೇ ದಿನಕ್ಕೆ 8 ಸಾವಿರ ಅರ್ಜಿ ಬಂದಿವೆ. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಅತ್ಯಂತ ಪಾರದರ್ಶಕವಾಗಿ, ಪ್ರಾಮಾಣಿಕತೆ ಮತ್ತು ಶ್ರದ್ದೆಯಿಂದ ಕೆಲಸ ಮಾಡಿದಲ್ಲಿ ಅರ್ಹರಿಗೆ ಸೌಲಭ್ಯ ದೊರೆಯಲಿವೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
     ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇನ್ನೂ ಬಡತನ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಲೋಪದೋಷಕ್ಕೆ ಜನಪ್ರತಿನಿಧಿಗಳಾದ ನಾವೇ ಕಾರಣ ಎಂಬುದನ್ನು ಮರೆಯಬಾರದು. ಜನಪ್ರತಿನಿಧಿಗಳಾದ ನಾವು ಬಡವರ ಕಣ್ಣೀರು ಒರೆಸುವ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು ಎಂದರು.
     ಮಧ್ಯವರ್ತಿಗಳ ಹಾವಳಿ, ಭಷ್ಟಾಚಾರದಿಂದಾಗಿ ಮುಕ್ತವಾಗಿ, ನೇರವಾಗಿ  ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಬೇಕು ಎಂದ ಅವರು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸಂಘಟಿತರಾಗಿ ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡೋಣ ಎಂದರು.
    ರೇಷ್ಮೆ, ಯುವಜನ, ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಗ್ರಾ.ಪಂ ಸದಸ್ಯರಿಗೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದ ಅವರು ಎಲ್ಲ ಜನಪ್ರತಿನಿಧಿಗಳು ಈ ಕಾರ್ಯಾಗಾರದ ಸದುಪಯೋಗಪಡಿಕೊಳ್ಳಬೇಕು ಎಂದರು.



       ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆತ್ಮವಿಶ್ವಾಸದಿಂದ ಬದುಕಬೇಕೆಂಬ ಘನ ಉದ್ದೇಶ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೇವಲ ಸರ್ಕಾರದ ಅನುದಾನ, ಸೌಲಭ್ಯಗಳನ್ನು ತಲುಪಿಸುವ ಪೋಸ್ಟ್‍ಮ್ಯಾನ್ ಮಾತ್ರವಾಗದೇ, ಹಣವಿಲ್ಲದೆ ಮಾಡುವ ಅನೇಕ ಮಾಹಿತಿ, ಅರಿವು ಕಾರ್ಯಗಳನ್ನು ಕೈಗೊಂಡು ಬದ್ದತೆಯಿಂದ, ಪ್ರಾಮಾಣಿಕವಾಗಿ ತಮ್ಮ ಕಾರ್ಯ ನಿರ್ವಹಿಸಬೇಕೆಂದರು.
      ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾವುದೇ ವ್ಯಕ್ತಿ ಊಟ, ಉದ್ಯೋಗವಿಲ್ಲದೇ ಇರಬಾರದೆಂದು ಸರ್ಕಾರ ನರೇಗಾ ಸೇರಿದಂತೆ ಅನೇಕ ಯೋಜನೆಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಿದೆ. ಈ ಎಲ್ಲ ಯೋಜನೆಗಳ ಕುರಿತು ಗ್ರಾ.ಪಂ ಸದಸ್ಯರು ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಿಳಿದುಕೊಂಡು, ಬಡವರಿಗೆ ತಲುಪಿಸುವುದು ಅವರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.
     ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ಬಗರ್‍ಹುಕುಂ ಸಾಗುವಳಿದಾರರಿಂದ ಹಕ್ಕುಪತ್ರಕ್ಕಾಗಿ 2.94 ಲಕ್ಷ ಅರ್ಜಿ ಸ್ವೀಕೃತವಾಗಿವೆ. ಜಿಲ್ಲೆಯಲ್ಲಿ 97 ಸಾವಿರ ಅರ್ಜಿ ಬಂದಿದ್ದು, 24,444 ಅರ್ಜಿ ವಿಲೇವಾರಿ ಆಗಿವೆ. ಅರಣ್ಯ ಸಾಗುವಳಿದಾರರು ಸೇರಿದಂತೆ ಯಾವುದೇ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ. ರೈತರು ತಾಳ್ಮೆಯಿಂದ ಇರಬೇಕೆಂದು ಹೇಳಿದರು.
       ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸವಲತ್ತುಗಳು ದೊರಕಬೇಕೆಂಬ ಕಲ್ಪನೆಯಿಂದ ದೀನ ದಯಾಳ ಉಪಾಧ್ಯಾಯರು ಅಂತ್ಯೋದಯ ಯೋಜನೆ ಜಾರಿಗೆ ತಂದರು. ಇದೇ ಪರಿಕಲ್ಪನೆಯನ್ವಯ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಒದಗಿಸುವ ಅಂತ್ಯೋದಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶೇ.90 ರಷ್ಟು ಜನಪ್ರತಿನಿಧಿಗಳು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರೂ ಕಾರ್ಯಾಗಾರದ ಸದುಪಯೋಗಪಡೆಯಬೇಕೆಂದ ಅವರು ಸರ್ಕಾರ ಗ್ರಾ.ಪಂ ಸದಸ್ಯರ ಗೌರವಧನವನ್ನು ಹೆಚ್ಚಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
   ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪುಸ್ತಕ ‘ಅಂತ್ಯೋದಯ’ ಬಿಡುಗಡೆ ಮಾಡಲಾಯಿತು. ವಿವಿಧ ನಿಗಮಗಳ ವತಿಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಸೌಲಭ್ಯ ವಿತರಣೆ ಹಾಗೂ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಅಲೆಮಾರಿ-ಅರೆ ಅಲೆಮಾರಿ ಸಮುದಾಯದ ಆಯ್ದ ಫಲಾನುಭವಿಗಳಿಗೆ ವಸತಿ ಯೋಜನೆಯಡಿ ಕಾರ್ಯಾದೇಶ ನೀಡಲಾಯಿತು.
      ಶಾಸಕರಾದ ಹರತಾಳು ಹಾಲಪ್ಪ, ಎಸ್ ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ್ ನಾಯ್ಕ್, ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಮಹಾನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎನ್.ಜೆ.ನಾಗರಾಜ್, ವಿವಿಧ ನಿಗಮ, ಪ್ರಾಧಿಕಾರ, ಆಯೋಗ, ಮಂಡಳಿಗಳ ಅಧ್ಯಕ್ಷರು, ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಸ್‍ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಸರ್ಕಾರದ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

.





Post a Comment

Previous Post Next Post