ಧರ್ಮದ ಆಧಾರದ ಮೇಲೆ ದೇಶ ವಿಭಜನೆಗೆ ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್- ಪ್ರಿಯಾಂಕ್ ಖರ್ಗೆ

 ವೀರ ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಎಂದು ಬಣ್ಣಿಸುತ್ತಿರುವ ಬಿಜೆಪಿಯವರ ವಾದವನ್ನು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.

                           ಪ್ರಿಯಾಂಕ್ ಖರ್ಗೆ

By : Rekha.M
Online Desk

ಬೆಂಗಳೂರು: ವೀರ ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಎಂದು ಬಣ್ಣಿಸುತ್ತಿರುವ ಬಿಜೆಪಿಯವರ ವಾದವನ್ನು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ. 

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಬ್ರಿಟನ್ ನಲ್ಲಿದ್ದಾಗ ಪ್ರತೀಕಾರದ ಕಾರಣಕ್ಕೆ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ ನಡೆಯುತ್ತದೆ. ಈ ಪ್ರಕರಣದಲ್ಲಿ ಬಂಧಿತರಾದಾಗ ವಿಚಾರಣೆ ಎದುರಿಸಲು ಭಾರತಕ್ಕೆ ಬರಲು ಅವರು ನಿರಾಕರಿಸುತ್ತಾರೆ. ಬಿಜೆಪಿಯವರು ಹೇಳುವಂತೆ  ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ ಎಂದು ಪ್ರಶ್ನಿಸಿದರು.

ದೇಶ ವಿಭಜನೆಗೆ ನೆಹರೂ- ಗಾಂಧಿ ಕಾರಣ ಎನ್ನುವ ಬಿಜೆಪಿಗರು ಇತಿಹಾಸ ಓದಲಿ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್. ಜಿನ್ನಾ ಅವರ ದೇಶ ವಿಭಜನೆಯ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪುತ್ತೇನೆ ಎಂದಿದ್ದರು ಸಾರ್ವಕರ್. ಪ್ರತ್ಯೇಕ ಸಿಖ್ ದೇಶದ ಬೇಡಿಕೆಗೂ ಅವರ ಬೆಂಬಲಿತ್ತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಇಡೀ ದೇಶ ಸಂಪೂರ್ಣ ಸ್ವರಾಜ್ಯಕ್ಕೆ ಆಗ್ರಹಿಸುತ್ತಿದ್ದಾಗ ಸಾರ್ವಕರ್ ಹಿಂದೂ ಮಹಾಸಭಾ ಮೂಲಕ ಬ್ರಿಟಿಷರಿಗೆ ಬೆಂಬಲ ನೀಡಿದ್ದು ಯಾಕೆ? ಸಾವರ್ಕರ್ ಅವರು ಕ್ವಿಟ್ ಇಂಡಿಯಾ ಚಳುವಳಿಗೆ ಸಹಕಾರ ನೀಡಲಿಲ್ಲ? ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜೊತೆ ಸರ್ಕಾರ ಮಾಡಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ

ಮಹಾತ್ಮ ಗಾಂಧಿ ಅವರೇ ಸಾವರ್ಕರ್ ಅವರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ತಿಳಿಸಿದ್ದರು ಎಂಬ ಬಿಜೆಪಿಗರ ವಾದ ಶುದ್ಧ ಸುಳ್ಳು. ಗಾಂಧೀಜಿ ಅವರೇ ತಮ್ಮ ಲೇಖನದಲ್ಲಿ ಸಾವರ್ಕರ್ ಅವರು ಇನ್ನು ಮುಂದೆ ಬ್ರಿಟಿಷರ ವಿರುದ್ಧ ಯಾವುದೇ ಹೋರಾಟ ಮಾಡುವುದಿಲ್ಲ, ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡಲು ಬಯಸಿದ್ದಾರೆ ಎಂದು ಬರೆದಿದ್ದರು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜೊತೆಗೆ ಶಿಕ್ಷೆಗೊಳಗಾದ 700ಕ್ಕೂ ಹೆಚ್ಚು ಖೈದಿಗಳಿದ್ದರು. ಬ್ರಿಟಿಷರಿಗೆ ಆಪ್ತರಾಗಿದ್ದ ಸಾರ್ವಕರು ಹೊರತುಪಡಿಸಿ ಉಳಿದ ಎಲ್ಲಾ ಖೈದಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿದ್ದರು. ಹೀಗಿದ್ದರೂ ಬ್ರಿಟಿಷರಿಗೆ ಅತಿ ಹೆಚ್ಚು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದು ಸಾವರ್ಕರ್ ಮಾತ್ರ ಎಂದು ಅವರು ಹೇಳಿದರು

Post a Comment

Previous Post Next Post