'ಎಎಪಿ ಬಿಟ್ಟು ಪಕ್ಷಕ್ಕೆ ಸೇರ್ಪಡೆಯಾದರೆ..'; ಮನೀಶ್ ಸಿಸೋಡಿಯಾ ಅವರಿಗೆ ಬಿಜೆಪಿಯಿಂದ ಸಂದೇಶ

 ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಒತ್ತಿ ಹೇಳಿದ ಅವರು, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿಗೆ ಸವಾಲು ಎಸೆದಿದ್ದಾರೆ.

                                           ಮನೀಶ್ ಸಿಸೋಡಿಯಾ

By : Rekha M
Online Desk

ನವದೆಹಲಿ: ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ತನಿಖೆಯನ್ನು ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಆಮ್ ಆದ್ಮಿ ಪಕ್ಷವನ್ನು ತೊರೆದು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಬಿಜೆಪಿಯಿಂದ ಸಂದೇಶ ಬಂದಿದೆ. ಒಂದು ವೇಳೆ ಪಕ್ಷಕ್ಕೆ ಸೇರಿಕೊಂಡರೆ, ಅವರ ವಿರುದ್ಧದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಎಲ್ಲಾ ಪ್ರಕರಣಗಳನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

'ನನಗೆ ಬಿಜೆಪಿಯಿಂದ ಸಂದೇಶ ಬಂದಿದೆ- ಆಪ್ ಅನ್ನು ತೊರೆದು ಬಿಜೆಪಿಗೆ ಸೇರಿಕೊಳ್ಳಿ. ಆಗ ಎಲ್ಲಾ ಸಿಬಿಐ ಮತ್ತು ಇ.ಡಿ ಪ್ರಕರಣಗಳನ್ನು ಮುಚ್ಚಲಾಗುವುದು' ಎಂದಿರುವುದಾಗಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಒತ್ತಿ ಹೇಳಿದ ಅವರು, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬಿಜೆಪಿಗೆ ಸವಾಲು ಎಸೆದಿದ್ದಾರೆ.

https://twitter.com/msisodia/status/1561579101059796992?s=20&t=yZueznTIu4h0q3gDVPfhsw

'ಬಿಜೆಪಿಗೆ ನನ್ನ ಪ್ರತ್ಯುತ್ತರ- ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ಬೇಕಿದ್ದರೆ ನಾನು ನನ್ನ ತಲೆಯನ್ನು ಕತ್ತರಿಸುತ್ತೇನೆ. ಆದರೆ, ಭ್ರಷ್ಟ ಹಾಗೂ ಪಿತೂರಿಗಾರರ ಮುಂದೆ ಬಗ್ಗುವುದಿಲ್ಲ. ನನ್ನ ಮೇಲಿನ ಎಲ್ಲಾ ಪ್ರಕರಣಗಳು ಸುಳ್ಳು, ನೀವು ಏನು ಬೇಕಾದರೂ ಮಾಡಿಕೊಳ್ಳಿ' ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಶುಕ್ರವಾರ ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು.

‘ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಅಬಕಾರಿ ಇಲಾಖೆಯ ಅಂದಿನ ಉಪ ಆಯುಕ್ತ ಆನಂದ್ ತಿವಾರಿ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ 2021-22ನೇ ಸಾಲಿನ ಅಬಕಾರಿ ನೀತಿಗೆ ಸಂಬಂಧಿಸಿದ ಶಿಫಾರಸು ಮಾಡುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಆರೋಪಿಸಿದೆ.


Post a Comment

Previous Post Next Post