ಪಕ್ಷವನ್ನು 'ಸಂಪೂರ್ಣವಾಗಿ ನಾಶಪಡಿಸಲಾಗಿದೆ', ಇದಕ್ಕೆ ನಾಯಕತ್ವವೇ ನೇರ ಹೊಣೆ: ಕಾಂಗ್ರೆಸ್ ತ್ಯಜಿಸಿದ ಆಜಾದ್

 ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್ ನಂತರ ಪಕ್ಷಕ್ಕೆ ಮತ್ತೊಂದು ಆಘಾತ...

                         ರಾಹುಲ್ ಗಾಂಧಿ - ಗುಲಾಂ ನಬಿ ಆಜಾದ್

By : Rekha.M
Online Desk

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಕಪಿಲ್ ಸಿಬಲ್ ಮತ್ತು ಅಶ್ವನಿ ಕುಮಾರ್ ನಂತರ ಪಕ್ಷಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ. 

ಆಜಾದ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ರಾಜೀನಾಮೆ ಪತ್ರ ಬರೆದಿದ್ದು, 
ಪಕ್ಷವನ್ನು "ಸಂಪೂರ್ಣವಾಗಿ ನಾಶಪಡಿಸಲಾಗಿದೆ". ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ತನಗೆ ಲಭ್ಯವಿರುವ ರಾಜಕೀಯ ಜಾಗವನ್ನು ಬಿಜೆಪಿಗೆ ಮತ್ತು ರಾಜ್ಯ ಮಟ್ಟದ ಜಾಗವನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ ಎಂದು ದೂರಿದ್ದಾರೆ.

"ಕಳೆದ ಎಂಟು ವರ್ಷಗಳಲ್ಲಿ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ದಂಗೆ ಏಳಲು ಪ್ರಯತ್ನಿಸಿದ್ದರಿಂದ ಇದೆಲ್ಲವೂ ಸಂಭವಿಸಿದೆ. ಗಂಭೀರವಲ್ಲದ ವ್ಯಕ್ತಿಯ ಕೈಗೆ ಪಕ್ಷದ ಚುಕ್ಕಾಣಿ ನೀಡುವ ಯತ್ನಗಳು ನಡೆದವು. ಪಕ್ಷಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್ ನ ಇಂದಿನ ಪರಿಸ್ಥಿತಿಗೆ ಇದೆಲ್ಲವೂ ಕಾರಣ’’ ಆಜಾದ್ ಅವರು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತಕ್ಕೆ ಯಾವುದು ಸರಿ ಎಂಬುದನ್ನು ನಿರ್ಧರಿಸಲು ಎಐಸಿಸಿಯನ್ನು ಮುನ್ನಡೆಸುತ್ತಿರುವ ಕೂಟ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಯಸುತ್ತಿರುವ ಜಿ-23 ಗುಂಪಿನ ಭಾಗವಾಗಿರುವ ಆಜಾದ್ ಅವರು ಹೇಳಿದ್ದಾರೆ.

ಇನ್ನು ಕಳೆದ ಕೆಲ ವರ್ಷಗಳಲ್ಲಿ ಕಾಂಗ್ರೆಸ್‌ನ ಕುಸಿತದ ಬಗ್ಗೆ ತಮ್ಮ ಉಲ್ಲೇಖಿಸಿದ ಆಜಾದ್‌, ‘2014ರಿಂದ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ, ಕಾಂಗ್ರೆಸ್ ಎರಡು ಲೋಕಸಭಾ ಚುನಾವಣೆಗಳನ್ನು ಅವಮಾನಕರ ರೀತಿಯಲ್ಲಿ ಸೋತಿದೆ. 2014-2022ರ ನಡುವೆ ನಡೆದ 49 ವಿಧಾನಸಭಾ ಚುನಾವಣೆಗಳಲ್ಲಿ 39ರಲ್ಲಿ ಪರಾಭವಗೊಂಡಿದೆ’ ಎಂದು ಹೇಳಿದ್ದಾರೆ.


Post a Comment

Previous Post Next Post