ಶಿವಮೊಗ್ಗ ನಗರದ ಪೊಲೀಸ್ ಚೌಕಿ ವೃತ್ತದಲ್ಲಿದ್ದ ಕ್ಯಾಂಟಿನ್ ವೊಂದರಲ್ಲಿ ಟೀ ಕುಡಿದು, ಜರ್ದಾ ಹಾಕಿಕೊಳ್ಳುತ್ತಾ ನಿಂತಿದ್ದ ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ನಡುರಸ್ತೆಯಲ್ಲೇ ಭೀಕರವಾಗಿ ಕೊಲೆಯಾಗಿದ್ದಾನೆ.ಮಲೆನಾಡಿನ ತವರೂರು ಶಿವಮೊಗ್ಗದಲ್ಲಿ (Shivamogga) ಮತ್ತೆ ನೆತ್ತರು ಹರಿದಿದೆ. ಮತ್ತೊಂದು ಮರ್ಡರ್ (Murder) ಆಗುವ ಮೂಲಕ ತಣ್ಣಗಿದ್ದ ಶಿವಮೊಗ್ಗದಲ್ಲಿ ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಶಿವಮೊಗ್ಗದಲ್ಲೀಗ ನಟೋರಿಯಸ್ ರೌಡಿ ಶೀಟರ್ ವೊಬ್ಬನ ಮರ್ಡರ್ ಆಗಿದ್ದು, ರೌಡಿ ಪಾಳಯದಲ್ಲಿ ಮತ್ತೆ ಸಂಚಲನ ಮೂಡಿಸಿದಂತಾಗಿದೆ. ಕಳೆದ ಹಲವು ವರ್ಷಗಳಿಂದ ರೌಡಿಗಳ ಚಟುವಟಿಕೆ ಕೊಂಚ ಕಡಿಮೆಯಾಗಿತ್ತಾದರೂ, ಇದೀಗ ರೌಡಿ ಶೀಟರ್ ಹಂದಿ ಅಣ್ಣಿ (Handi Anni) ಮರ್ಡರ್ ನಿಂದಾಗಿ ಮತ್ತೆ ಪಾತಕ ಲೋಕ ಬಾಲ ಬಿಚ್ಚುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಪಾತಕಿಯನ್ನು ಹಾಡಹಗಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವುದು ಇಡೀ ಶಿವಮೊಗ್ಗವನ್ನೇ ತಲ್ಲಣಗೊಳಿಸಿದೆ.
ಕೆ.ಎ. 19 ರಿಜಿಸ್ಟ್ರೇಷನಿನ ಇನ್ನೋವಾ ಕಾರಿನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಭೀಕರವಾಗಿ ದಾಳಿ ನಡೆಸಿ, ಸರ್ಕಲ್ ನ ನಡುವಿನಲ್ಲೇ ಹೆಣವಾಗುವಂತೆ ಮಾಡಿದ್ದಾರೆ. ಇಲ್ಲಿನ ವೃತ್ತದ ಹೊಟೆಲ್ ವೊಂದರ ಮುಂಭಾಗದಿಂದ ಅಟ್ಟಾಡಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಅಣ್ಣಪ್ಪನನ್ನು, ಮಚ್ಚು, ಲಾಂಗುಗಳಿಂದ ಭೀಕರವಾಗಿ ಕೊಚ್ಚಿದ್ದಾರೆ. ತಲೆ ಹಿಂಭಾಗಕ್ಕೆ ಬಲವಾಗಿ ಹೊಡೆದಿರುವ ದುಷ್ಕರ್ಮಿಗಳು, ಸುಮಾರು 5-6 ಕಡೆಗಳಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಇದು ಸ್ಥಳಿಯ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದ್ದು, ಇನ್ನೋವಾ ಕಾರಿನಲ್ಲಿ ಹಂತಕರು ಎಸ್ಕೇಪ್ ಆಗಿದ್ದಾರೆ.ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಮೇಲೆ 9 ಕೇಸ್
ಮೊದಲು ಶಿವಮೊಗ್ಗವನ್ನು ಬೆಚ್ಚಿಬೀಳಿಸಿದ ಜೋಡಿ ಲವ ಕುಶ ಮರ್ಡರ್ ಕೇಸ್ ನಲ್ಲಿ ಪಾತಕ ಲೋಕಕ್ಕೆ ಇಳಿದ ಈತ , ಬಂಕ್ ಬಾಲು ಕೇಸ್ ನಲ್ಲಿ ಹಬ್ಬೆಟ್ಟು ಮಂಜನಿಗೆ ರೈಟ್ ಹ್ಯಾಂಡ್ ಆಗಿ ಬಡ್ತಿ ಹೊಂದಿದ. ಹಬ್ಬೆಟ್ಟು ಮಂಜನ ಹಲವು ಕೆಲಸಗಳಲ್ಲಿ ಕೈ ಜೋಡಿಸಿದ ಹಂದಿ ಅಣ್ಣಿ ಶಿವಮೊಗ್ಗದ ರೌಡಿ ಲೋಕದಲ್ಲಿ ಬೆಳೆಯುತ್ತಾ ಬಂದಿದ್ದ
ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಮೇಲೆ 9 ಕೇಸುಗಳಿದ್ದು, ಇದರಲ್ಲಿ ಎರಡು ಕೊಲೆ ಕೇಸುಗಳು ಸೇರಿದಂತೆ, ಹಫ್ತಾ ವಸೂಲಿ, ಡಕಾಯಿತಿ, ದೊಂಬಿ, ಬೆದರಿಕೆ ಹೀಗೆ ಹಲವಾರು ಕೇಸುಗಳಿವೆ. ಇನ್ನು ದುಷ್ಕರ್ಮಿಗಳು ಬೆಂಗಳೂರಿನಿಂದ ಬಂದಿದ್ದರು ಎಂದು ಹೇಳಲಾಗಿದ್ದು, ಈ ಹಿಂದೆ ನಟೋರಿಯಸ್ ರೌಡಿ ಶೀಟರ್ ಗಳಾಗಿದ್ದ ಲವ-ಕುಶ ಮರ್ಡರ್ ಕೇಸಿನಲ್ಲಿ ಹಂದಿ ಅಣ್ಣಿ ಪ್ರಮುಖ ಆರೋಪಿಯಾಗಿದ್ದ. ಅಷ್ಟೇಅಲ್ಲದೇ, ನನ್ನ ಯಾರು ಕೂಡ ತುಳಿಯೋಕೆ ಆಗಲ್ಲಾ ಎಂಬ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ಕೇವಲ 15 ನಿಮಿಷಗಳಲ್ಲಿಯೇ, ರೌಡಿ ಶೀಟರ್ ನ ಹತ್ಯೆ ನಡೆದಿರುವುದು ಕಾಕತಾಳಿಯವಾಗಿದೆ.
ಶಿವಮೊಗ್ಗದಲ್ಲಿ ಮತ್ತೊಬ್ಬ ರೌಡಿ ಶೀಟರ್ ನ ಕೊಲೆಯಾಗಿದ್ದು, ಹತ್ಯೆ ಮಾಡಿರುವ ಹಿನ್ನಲೆ ಏನು ಎಂಬುದು ಇದೀಗ ತನಿಖೆಯಿಂದಷ್ಟೇ ಹೊರಬರಬೇಕಿದೆ. ಕಳೆದ 4-5 ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ, ಮರಳು ಸಾಗಾಣಿಕೆ, ರಿಯಲ್ ಎಸ್ಟೇಟ್ ನಲ್ಲಿ ತೊಡಗಿಕೊಂಡಿದ್ದ ಹಂದಿ ಅಣ್ಣಿಯ ಹತ್ಯೆ ಯಾವುದರ ರಿವೆಂಜ್ ಅನ್ನೋದು ತನಿಖೆಯಿಂದಷ್ಟೇ ಬಯಲಾಗಬೇಕಿದೆ.
Post a Comment